ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?

ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ ಇಲ್ಲಿದೆ. ಸ್ಥಾವರಗಳ ಕುರಿತ ಈ ಸಂಚಿಕೆ ನಿಮಗೆ ಇಷ್ಟವಾಗಬಹುದು ಎಂದು ನಂಬಿರುವೆ. ಪ್ರತಿಕ್ರಿಯೆಗೆ ಸ್ವಾಗತ. ಇಶ್ಯೂ ಸಂಚಿಕೆಯು ನೋಡಲು ಮುದ್ದಾಗಿ ಕಾಣಿಸುತ್ತದೆಯಾದರೂ, ದೃಷ್ಟಿಸವಾಲಿನವರು ಓದಲಾಗದು. ಆದ್ದರಿಂದ ಇಶ್ಯೂ ಸಂಚಿಕೆಯ ಕೊಂಡಿಯ ಕೆಳಗೆ ಸಂಚಿಕೆಯ ಲೇಖನಗಳನ್ನು (ಮಿತ್ರಮಾಧ್ಯಮದಲ್ಲಿ ಈ ಮೊದಲೇ ಪ್ರಕಟವಾಗದಂಥವು; ಏಕೆಂದರೆ ಕೆಲವೊಮ್ಮೆ ಇತ್ತೀಚೆಗೆ ಪ್ರಕಟವಾದ ಲೇಖನಗಳನ್ನೂ ಸೇರಿಸಿರುತ್ತೇನೆ) ಓದಬಹುದು. ಈ ಅನುಕೂಲವನ್ನು ಮೊದಲೇ ಒದಗಿಸದಿದ್ದುದಕ್ಕೆ ವಿಷಾದಿಸುತ್ತೇನೆ.

ಸಂಚಿಕೆಯ ಮುನ್ನುಡಿ

ನೀವೇ ಹೇಳಿ… ಸ್ಥಾವರಕ್ಕಳಿವುಂಟೆ?

ಬಿಜಾಪುರದ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿಲ್ಲ. ರೈತರಿಗೆ ಹೊಲಕ್ಕೆ ಬಿಡಿ, ಜೀವ ಉಳಿಸಿಕೊಳ್ಳಲೂ ನೀರಿಲ್ಲ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲು ಕರ್ನಾಟಕದ ಮುಖ್ಯಮಂತ್ರಿಯವರು ವಿನಂತಿ ಮಾಡಿಕೊಂಡಿದ್ದಾರೆ.

ರಾಯಚೂರಿನ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಡೆಸಲು ನೀರಿಲ್ಲ. ಈ ಸಂಚಿಕೆ ಪ್ರಕಟವಾಗುವ ಹೊತ್ತಿಗೆ ಇಡೀ ಸ್ಥಾವರವೇ ತನ್ನ ಕೆಲಸವನ್ನು ನಿಲ್ಲಿಸಬಹುದು. ಏಕೆಂದರೆ ಕೃಷ್ಣಾ ನದಿಯಲ್ಲಿ ನೀರಿಲ್ಲ. ಮೊದಲೇ ಈ ಸ್ಥಾವರವು ತ್ರಿಶಂಕು ನರಕ. ಕಲ್ಲಿದ್ದಲು ಎಲ್ಲಿಂದಲೋ ರೈಲಿನಲ್ಲಿ ಬರಬೇಕು. ಅದೂ ದಾಸ್ತಾನಿಲ್ಲ. ಸ್ಥಾವರವು ಉಗುಳುವ ಹಾರುಬೂದಿಯ ನಿರ್ವಹಣೆ ? ಕೃಷ್ಣಾರ್ಪಣ (ಕೃಷ್ಣಾ ನದಿಗೆ ತೇಲಿಬಿಡುವುದು) ಮಾಡುವುದಷ್ಟೆ ಹೊರತು ವೈಜ್ಞಾನಿಕ ನಿಯಂತ್ರಣವೇ ಇಲ್ಲ.

ಇಷ್ಟಾಗಿಯೂ ನಮಗೆ ಕೂಡಿಗಿಯಲ್ಲಿ ಇನ್ನೊಂದು ವಿದ್ಯುತ್ ಸ್ಥಾವರ ಬೇಕು. ಅದಕ್ಕೂ ಛತ್ತೀಸ್‌ಗಢದಿಂದಲೋ, ಇನ್ನೆಲ್ಲಿಂದಲೋ ಕಲ್ಲಿದ್ದಲನ್ನು ರೇಕುಗಳಲ್ಲು ತರಬೇಕು. ನೀರು? ಇದೆಯಲ್ಲ ಆಲಮಟ್ಟಿ ಅಣೆಕಟ್ಟು ಎನ್ನುತ್ತದೆ ಸರ್ಕಾರ.

ನೋಡಿ: ಕುಡಿಯಲು, ರೈತರ ಹೊಲಗಳಿಗೆ ಹನಿಸಲು ಅಣೆಕಟ್ಟುಗಳಲ್ಲಿ ನೀರಿಲ್ಲ. ಆದರೆ ರಕ್ಕಸಗಾತ್ರದ ಕಲ್ಲಿದ್ದಲು ಸ್ಥಾವರಗಳಿಗೆ ಈ ಅಣೆಕಟ್ಟುಗಳಿಂದಲೇ ನೀರು ಕೊಡಬೇಕಂತೆ. ಅಣೆಕಟ್ಟುಗಳನ್ನು ಕಟ್ಟಿದ ಮೂಲ ಮತ್ತು ಅಧಿಕೃತ ಉದ್ದೇಶವೇ ರೈತರಿಗೆ ಕೃಷಿಭೂಮಿಗೆ ಕನಿಷ್ಠ ನೀರು ಒದಗಿಸಲು. ನೆನಪಿಡಿ: ಅಣೆಕಟ್ಟುಗಳನ್ನು ಕಟ್ಟುವುದು ಐಷಾರಾಮಿ ನೀರಾವರಿಗಲ್ಲ; ಎಲ್ಲರಿಗೂ ಕನಿಷ್ಠ ನೀರು ಒದಗಿಸಿ ಹೆಚ್ಚು ಬೆಳೆ ತೆಗೆಯುವುದು.

ಹಾಗಾದರೆ ಕಲ್ಲಿದ್ದಲು ಸ್ಥಾವರಗಳಿಗೆ ನೀರು ಕೊಡಬೇಕೆ? ಖಂಡಿತ ಕೂಡದು. ನಮ್ಮ ರೈತರ ಭೂಮಿಯನ್ನು ವಶಪಡಿಸಿಕೊಂಡು ಸ್ಥಾವರ ಕಟ್ಟಿ, ಅಲ್ಲಿಗೆ ನೀರು ಕೊಡಲು ಇನ್ನಷ್ಟು ಸಾವಿರ ರೈತರ ಹೊಲಗಳನ್ನು ಒಣಗಿಸುವುದು ಪ್ರಜಾತಂತ್ರವೆ? ಇನ್ನು ಪರಿಹಾರ ಪಡೆದ ರೈತರು ಹಣ ಉಳಿಸಲು, ಬೆಳೆಸಲು ಹೋಗಿ ಏನೇನೋ ಸಾಮಾಜಿಕ ಪರಿಣಾಮಗಳಾಗುವುದನ್ನು ತಪ್ಪಿಸಲಾದೀತೆ?

ರಾಷ್ಟ್ರೀಯ ಹೆದ್ದಾರಿ ೫೦ ಒಂದು ಬದಿಯಲ್ಲಿರುವ ಆಲಮಟ್ಟಿ ಅಣೆಕಟ್ಟು ಅಭಿವೃದ್ಧಿಯ ಸ್ಥಾವರಕ್ಕೆ ಸಾಕ್ಷಿಯಾದರೆ, ಇನ್ನೊಂದು ಬದಿಯಲ್ಲಿರುವ ಕೂಡಲ ಸಂಗಮವು ಬಸವಣ್ಣನವರ ಐಕ್ಯತಾಣ. ಯಾವುದು ಬೇಕು? ಅಮವಾಸ್ಯೆಯ ದಿನದಂದು ಕೂಡಲಸಂಗಮಕ್ಕೆ ಭಕ್ತಿ ಪರವಶತೆಯಿಂದ ಬರುವ ಜನರು ಮುಂದಿನ ದಿನಗಳಲ್ಲಿ ಕಲ್ಲಿದ್ದಲಿನ ರಾಡಿಯನ್ನೇ ಬಳಿದುಕೊಂಡು ಬದುಕಬೇಕಾದೀತು. ನಿತ್ಯವೂ ನೀರಿಲ್ಲದ, ಕಾಳಿಲ್ಲದ, ಕೆಲಸವಿಲ್ಲದ ಅಮವಾಸ್ಯೆಯಾದೀತು.

ನಮ್ಮ ಸ್ಥಾವರಗಳು ಯಾವುದಿರಬೇಕು ಎಂದು ತೀರ್ಮಾನಿಸುವುದು ಅಂತಿಮವಾಗಿ ಜನರಿಗೆ ಬಿಟ್ಟ ವಿಚಾರ. ಆದರೆ ನಮ್ಮ ವಿಜ್ಞಾನದ ಅರಿವು ನಮ್ಮ ಬದುಕನ್ನು ಹಸನುಗೊಳಿಸುವ ಬದಲಿಗೆ ರಣಬದುಕಿಗೆ ತಳ್ಳುವುದನ್ನು ಸಹಿಸಿಕೊಳ್ಳಬೇಕೆ? ಯೋಚಿಸಿ. ಈ ಹಿನ್ನೆಲೆಯಲ್ಲೇ ಮಿತ್ರಮಾಧ್ಯಮದ `ಜಜಂತರ್ ಮಮಂತರ್ ನ ಎರಡನೇ ಸಂಚಿಕೆ ರೂಪುಗೊಂಡಿದೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

ಬೇಳೂರು ಸುದರ್ಶನ

೨೬ ಏಪ್ರಿಲ್ ೨೦೧೨

ಲೇಖನ ೧

ಕೂಡಿಗಿ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ ಲಾಭವಿದೆಯೆ? ( ಈ ಲೇಖನವು ಈ ಹಿಂದೆ ಪ್ರಕಟವಾಗಿತ್ತು. ಕೊಂಡಿಯನ್ನು ಅನುಸರಿಸಿ)

ಲೇಖನ ೨

ಚೆರ್ನೋಬಿಲ್ : ಸ್ಥಾವರದ ಜೊತೆಗೇ ಮನುಕುಲಕ್ಕೂ ಅಳಿವು

ಸ್ಟಿಲಿಯಾನ್ ಪೆಟ್ರೋವ್‌ಗೆ ಈಗ ೩೨ ವರ್ಷ. ಅವರು ಆಸ್ಟನ್ ವಿಲ್ಲಾ ಫುಟ್‌ಬಾಲ್ ತಂಡದ ನಾಯಕ. ೧೪ ವರ್ಷಗಳಿಂದ ಕ್ಯಾನ್ಸರ್ ಪೀಡಿತ. ಅವರಿಗೆ ಚಿಕಿತ್ಸೆ ನೀಡುತ್ತ ಬಂದ ಡಾ. ಮಿಹೈಲ್ ಇಲೀವ್ ಹೇಳುವಂತೆ ೧೯೮೬ರ ಚೆರ್ನೋಬಿಲ್ ದುರಂತದಿಂದ ಹಬ್ಬಿದ ಪರಮಾಣು ವಿಕಿರಣವೇ ಕ್ಯಾನ್ಸರಿಗೆ ಕಾರಣ. ಆಗ ಪೆಟ್ರೋವ್ ಆಟವಾಡುತ್ತ ಇದ್ದದ್ದು ಸಾವಿರ ಕಿಲೋಮೀಟರ್‌ಗಳಾಚೆಯ ಬಲ್ಗೇರಿಯಾದ ಮೊಂಟಾನಾದಲ್ಲಿ. ದುರಂತ ಘಟಿಸಿದ ಬಗ್ಗೆ ಆಗ ಆಡಳಿತ ನಡೆಸುತ್ತಿದ್ದ ಕಮ್ಯುನಿಸ್ಟ್ ಸರ್ಕಾರವು ಸೂಕ್ತ ಪ್ರಚಾರ ನೀಡಲಿಲ್ಲ; ಎಲ್ಲವನ್ನೂ ಮುಚ್ಚಿಟ್ಟಿತು. ನೂರಾರು ಮಕ್ಕಳಿಗೆ ವಿಕಿರಣದ ಮೋಡ ಕವಿಯಿತು. ವಿಕಿರಣಯುಕ್ತ ಹಣ್ಣುಗಳನ್ನು ತಿಂದ ಮಕ್ಕಳಿಗೆ ಇನ್ನೇನಾದೀತು?

ಈ `ಚೆರ್ನೋಬಿಲ್ ಮಕ್ಕಳು’ ಈಗ ಕ್ಯಾನ್ಸರಿನ ಕಟುಬದುಕಿಗೆ ಹೊಂದಿಕೊಳ್ಳಬೇಕಿದೆ. ಇವರೂ ಸೇರಿದಂತೆ ಚೆರ್ನೋಬಿಲ್ ಪರಮಾಣು ದುರಂತಕ್ಕೆ ಒಟ್ಟು ಎರಡು ಲಕ್ಷ ಜನರು ಬಲಿಯಾಗುವರು ಎಂದು ಗ್ರೀನ್‌ಪೀಸ್ ಸಂಸ್ಥೆ ಅಂದಾಜು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಕಿರಣಕ್ಕೆ ತುತ್ತಾದವರ ಸಂಖ್ಯೆ ಆರು ಲಕ್ಷ ದಾಟುತ್ತದೆ.

ಏಪ್ರಿಲ್ ೨೬ರ ಈ ದಿನ ೧೯೮೬ರ ವರ್ಷ ಘಟಿಸಿದ ಈ ದುರಂತವು ಮನುಕುಲದ ಆತ್ಮಸಾಕ್ಷಿಯನ್ನೇ ಕದಡಬೇಕಿತ್ತು. ಹಾಗಾಗಲಿಲ್ಲ. ಅದಾದ ಮೇಲೆ ಕಳೆದ ವರ್ಷವಷ್ಟೆ ಭೀಕರ ಸುನಾಮಿಯು ಫುಕುಶಿಮಾ ದುರಂತಕ್ಕೆ ಕಾರಣವಾಯಿತು. ಆದರೂ ನಮ್ಮ ಆತ್ಮಸಾಕ್ಷಿ ಅಷ್ಟೇನೂ ಕದಲಲಿಲ್ಲ. ತಮಿಳುನಾಡಿನ ಕೂಡಂಕುಳಂ ಪರಮಾಣು ಸ್ಥಾವರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ಮತೀಯ ಬಣ್ಣ ಹಚ್ಚಿ ಪರಮಾಣು ಸ್ಥಾವರ ಸ್ಥಾಪನೆಂ ಂಕೇತವಾಗಿ ಪರಿವರ್ತಿಸುವ ಹಂತದಲ್ಲಿರುವ ನಮಗೆ ಇನ್ನೇತರ ಆತ್ಮಸಾಕ್ಷಿ ಹೇಳಿ!

೬೪ರ ಹರೆಯದ ವ್ಲಾದಿಮಿರ್ ಕಿಶ್ಕೋ ಇತ್ತೀಚೆಗೆ ಸತ್ತರು. ಅವರು ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್‌ರಾದ ವ್ಲಾದಿಮಿರ್ ಮತ್ತು ವಿತಾಲಿ ಕಿಶ್ಕೋರ ತಂದೆ. ಅವರೂ ಚೆರ್ನೋಬಿಲ್ ವಿಕಿರಣದ ಬಲಿಯೇ. ಹೇಳಲು ಇಂಥ ಕಥೆಗಳು ಬೇಕಾದಷ್ಟಿವೆ.

ಮನುಷ್ಯರಷ್ಟೇ ಅಲ್ಲ, ಸಕಲ ಚರಾಚರಗಳನ್ನೂ ಆಕ್ರಮಿಸಿದ ಈ ವಿಕಿರಣವು ಹೊಸ ಹೊಸ ಭೀಕರ ಸತ್ಯಗಳನ್ನು ಹೊರಚೆಲ್ಲುತ್ತಿದೆ. ಉದಾಹರಣೆಗೆ ೨೦೦೬-೦೯ರ ಅವಧಿಯಲ್ಲಿ ಚೆರ್ನೋಬಿಲ್ ಪ್ರದೇಶದಲ್ಲಿ ಎಲ್ಲ ವಯಸ್ಕ ಹಕ್ಕಿಗಳೂ ಸಾಯುವ ಪ್ರಮಾಣ ಹೆಚ್ಚಾಗುತ್ತಿದೆ. ಅದರರ್ಥ ಇಷ್ಟೆ: ಈ ಪ್ರದೇಶದಲ್ಲಿ ಕಡಿಮೆ ವಯಸ್ಸಿನ ಹೊಸ ಹಕ್ಕಿಗಳು ಮಾತ್ರ ಇವೆ. ಚೆರ್ನೋಬಿಲ್ ಹೊಕ್ಕರೆ ಸಾವಿನ ಬಿಲವನ್ನೇ ಹೊಕ್ಕಂತೆ. ಅದರಲ್ಲೂ ಹೆಣ್ಣು ಹಕ್ಕಿಗಳ ಮರಣ ಪ್ರಮಾಣ ಹೆಚ್ಚು.

ಜರ್ಮನಿಯಲ್ಲಿರುವ ಇಂಟರ್‌ನ್ಯಾಶನಲ್ ಫಿಜಿಶಿಯನ್ಸ್ ಫಾರ್ ದಿ ಪ್ರಿವೆನನ್‌ಶನ್ ಆಫ್ ನ್ಯೂಕ್ಲಿಯರ್ ವಾರ್ (ಐಪಿಪಿಎನ್‌ಡಬ್ಲ್ಯು) ಸಂಸ್ಥೆಯು ಕಳೆದ ವರ್ಷ ಪ್ರಕಟಿಸಿದ ಚೆರ್ನೋಬಿಲ್ ಕುರಿತ ವರದಿಯು ದುರಂತವು ಉಂಟುಮಾಡಿದ ಅನಾರೋಗ್ಯದ ಸಂಗತಿಗಳನ್ನು ಅಂಕಿ ಅಂಶಗಳೊಂದಿಗೆ ಚರ್ಚಿಸಿದೆ. ಅದರ ಮುಖ್ಯಾಂಶಗಳನ್ನು ಓದೋಣ ಬನ್ನಿ:

ವಿಕಿರಣಕ್ಕೆ ತುತ್ತಾದ ವಿಕಿರಣ ಶುದ್ಧೀಕರಣದ ಕಾರ್ಮಿಕರ ಸಂಖ್ಯೆ: ೮.೩೦ ಲಕ್ಷ. ೩೦ ಕಿಲೋಮೀಟರ್ ಫಾಸಲೆಯಲ್ಲಿ ಅತಿ ತೀವ್ರ ವಿಕಿರಣ ಪ್ರದೇಶದಿಂದ ಸ್ತಳಾಂತರಗೊಂಡವರ ಸಂಖ್ಯೆ: ೩.೫೦ ಲಕ್ಷ. ರಶ್ಯಾ, ಬೆಲಾರಸ್ ಮತ್ತು ಉಕ್ರೇನ್‌ನಲ್ಲಿ ತೀವ್ರ ವಿಕಿರಣಕ್ಕೆ ತುತ್ತಾದ ಜನರ ಸಂಖ್ಯೆ: ೮೩ ಲಕ್ಷ.

ವಿಕಿರಣದಿಂದ ಉಂಟಾಗುವ ಕಾಯಿಲೆಗಳು: ೧) ಕ್ಯಾನ್ಸರ್: ಈ ರೋಗವು ಪತ್ತೆಯಾಗಲು ೨೫-೩೦ ವರ್ಷಗಳೇ ಬೇಕು. ಸದ್ಯಕ್ಕೆ ಗಂಟಲಿನ, ಸ್ತನಗಳ ಮತ್ತು ಮೆದುಳಿನ ಗಡ್ಡೆಗಳ ಕ್ಯಾನ್ಸರ್ ಪ್ರಕರಣಗಳು ಕಾಣುತ್ತಿವೆ. ಅಲ್ಲದೆ ಮೂತ್ರಪಿಂಡ, ಹೊಟ್ಟೆ, ರಕ್ತ, ಥೈರಾಯ್ಡ್ ಕ್ಯಾನ್ಸರಿನ ಪ್ರಕರಣಗಳೂ ಈಗ ತಲೆದೋರುತ್ತಿವೆ. ೨) ವಿಕೃತ ದೇಹರಚನೆ, ಭ್ರೂಣಮರಣ, ಬಂಜೆತನ ೩) ಕ್ಯಾನ್ಸರೇತರ ಕಾಯಿಲೆಗಳು: ಮೆದುಳಿನ ವಿಕೃತಿ, ತೀವ್ರ ವಯಸ್ಕತನ, ಮನೋದೈಹಿಕ ಮತ್ತು ಮಾನಸಿಕ ಕಾಯಿಲೆಗಳು.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ನೀಡಿರುವ ಅಂಕಿ ಅಂಶಗಳೆಲ್ಲವೂ ತಪ್ಪುಗಳಿಂದ ಕೂಡಿವೆ. ಐಎಇಎ ಪ್ರಕಾರ ದುರಂತವಾದ ಕೂಡಲೇ ೪೦೦೦ ಜನ ಸತ್ತಿದ್ದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ೮೯೩೦ ಜನ ಸತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಆಧಾರಗಳನ್ನೇ ನೋಡಿದರೆ ೧೦ ಸಾವಿರದಿಂದ ೨೫ ಸಾವಿರ ಹೆಚ್ಚುವರಿ ಸಾವು ಸಂಭವಿಸಿದೆ ಎಂದೇ ಹೇಳಬೇಕಾಗುತ್ತದೆ.

ಈ ವರದಿಯ ೬೭ ಪುಟಗಳಲ್ಲಿ ಇರುವ ಎಲ್ಲ ಮಾಹಿತಿಯನ್ನೂ ಕೊಡಲಾಗುತ್ತಿಲ್ಲ. ಉದಾಹರಣೆಗೆ ಬೆಲಾರಸ್ ಪ್ರದೇಶದಲ್ಲಿ ದುರಂತಕ್ಕಿಂತ ೧೩ ವರ್ಷಗಳ ಮೊದಲು ಮತ್ತು ದುರಂತವಾದ ೧೩ ವರ್ಷಗಳ ನಂತರ ಕಂಡುಬಂದ ಥೈರಾಯ್ಡ್ ಕ್ಯಾನ್ಸರಿನ ಪ್ರಮಾಣದ ಈ ಕೋಷ್ಟಕವನ್ನಷ್ಟೆ ಗಮನಿಸಿ:

ವಯಸ್ಸು ೧೯೭೩- ೧೯೮೫ ೧೯೮೬- ೧೯೯೮ ಹೆಚ್ಚಳ
೦-೧೮ ೭ ೪೦೭ ೫೮-ಪಟ್ಟು
೧೯-೩೪ ೪೦ ೨೧೧ ೫.೩-ಪಟ್ಟು
೩೫-೪೯ ೫೪ ೩೨೬ ೬-ಪಟ್ಟು
೫೦-೬೪ ೬೩ ೩೧೪ ೫-ಪಟ್ಟು
>೬೪ ೫೬ ೧೪೬ ೨.೬-ಪಟ್ಟು
ಚೆರ್ನೋಬಿಲ್ ದುರಂತದ ಪರಿಣಾಮವು ಹಲವು ವರ್ಷಗಳ ನಂತರವೇ ಕಣ್ಣಿಗೆ ಕಾಣಿಸುತ್ತದೆ ಎಂಬುದಕ್ಕೆ ಈ ಕೋಷ್ಟಕವನ್ನು ಗಮನಿಸಿ: ದಿನ ಕಳೆದಂತೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ!

ಈ ವರದಿಯು ಮುಖ್ಯವಾಗಿ ಜರ್ಮನಿಯ ಎಲ್ಲ ಪರಮಾಣು ಸ್ಥಾವರಗಳನ್ನು ಮುಚ್ಚಬೇಕು ಎಂದು ಬೇಡಿಕೆಯಿಟ್ಟಿತ್ತು. ಜರ್ಮನಿ ಸರ್ಕಾರವೂ ಈ ಬೇಡಿಕೆಯನ್ನು ಮನ್ನಿಸಿ ೨೦೨೨ರ ಹೊತ್ತಿಗೆ ತನ್ನ ಎಲ್ಲ ಪರಮಾಣು ಸ್ಥಾವರಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ.

ಫುಕುಶಿಮಾ ದುರಂತಕ್ಕೆ ಒಂದು ವರ್ಷವಾದ ಬಗ್ಗೆ ಮುಂದಿನ ಪುಟದಲ್ಲಿ ಪ್ರತ್ಯೇಕ ಲೇಖನವಿದೆ. ಓದಿ.
ಚೆರ್ನೋಬಿಲ್ ದುರಂತದ ಮನಕಲಕುವ ಚಿತ್ರಗಳಿಗಾಗಿ ಇಲ್ಲಿಗೆ ಬನ್ನಿ:
http://www.boston.com/bigpicture/2012/02/gerd_ludwigs_long_shadow_of_ch.html

http://www.telegraph.co.uk/news/picturegalleries/worldnews/9128776/Photographs-of-Chernobyl-and-the-ghost-town-of-Pripyat-by-Michael-Day.html?frame=2161225

ಲೇಖನ ೩
ಫುಕುಷಿಮಾ : ಒಂದೇ ವರ್ಷದ ಕಥೆ

ಮಾರ್ಚ್ ೧೧ರ ಆ ಶನಿವಾರದ ಕಥೆ ಯಾರಿಗೆ ಗೊತ್ತಿಲ್ಲ? ಜಪಾನಿಗೆ ಅಪ್ಪಳಿಸಿದ ಸುನಾಮಿಗೆ ಇಡೀ ದ್ವೀಪವೇ ನಡುಗಿತು. ಸಾವು, ನೋವು, ಯಾತನೆ – ಎಲ್ಲವೂ ವರದಿಯಾದವು. ಜೊತೆಗೆ ಅಲ್ಲಿನ ಫುಕುಷಿಮಾ ದಾಯ್‌ಚಿಯ ಪರಮಾಣು ವಿದ್ಯುತ್ ಸ್ಥಾವರವೂ ತತ್ತರಿಸಿ, ಒಡೆದು, ವಿಕಿರಣ ಸೋರಿಕೆಯಾಗಿ… ಅಬ್ಬಾ, ಒಂದು ವರ್ಷ ಕಳೆದಿದೆಯಲ್ಲ…

ಪರಮಾಣು ಸ್ಥಾವರಗಳು ನರಕದ ಟೈಂಬಾಂಬ್‌ಗಳು ಎಂಬುದು ಅಲ್ಲಿ ಖಚಿತವಾಯಿತು. ರಶ್ಯಾದ ಚೆರ್ನೋಬೈಲಿನಂಥ ದೊಡ್ಡ ಪ್ರದೇಶವೀಗ ವಸ್ತುಶಃ ವಿಷಪೂರಿತ ನಿರ್ಜೀವ ತಾಣ. ಅಲ್ಲೀಗ ರೌರವ ಮೌನ. ಇಪ್ಪತ್ತು ಕಿಲೋಮೀಟರ್ ಫಾಸಲೆಯಲ್ಲಿ ಯಾವ ಮನುಷ್ಯನೂ ಇರುವಂತಿಲ್ಲ. ೩೦ ಕಿಮೀವರೆಗಿನ ಜನರು ವಿಕಿರಣ ತಾಗದಂತೆ ಎಚ್ಚರಿಕೆಯಿಂದ ಬದುಕಬೇಕು.

ಪುಟ್ಟ ದೇಶಕ್ಕೆ ದೊಡ್ಡ ಪಾಠ

ವಿಶ್ವದಲ್ಲೇ ಅತ್ಯಂತ ಕ್ರಿಯಾಶೀಲ ದೇಶವಾದ ಜಪಾನ್‌ಗೆ ಫುಕುಷಿಮಾ ಒಂದು ದೊಡ್ಡ ಪಾಠ. ಅದಕ್ಕೇ ಅಲ್ಲಿನ ೫೨ ಪರಮಾಣು ಸ್ಥಾವರಗಳ ಪೈಕಿ ಈಗ ಕೇವಲ ಎರಡು ಸ್ಥಾವರಗಳು ವಿದ್ಯುತ್ ಉತ್ಪಾದಿಸುತ್ತಿವೆ. ಜಪಾನಿನ ಪ್ರಧಾನಿ ಯೊಶಿಹಿಕೋ ನೋಡಾ `ನಾವು ಈ ದುರಂತದಿಂದ ಹಲವು ಪಾಠಗಳನ್ನು ಕಲಿಯುತ್ತಿದ್ದೇವೆ ಎಂದು ಹೇಳುತ್ತಲೇ ನಾವು ಅನುಭವಿಸಿದ್ದನ್ನು ಜಗತ್ತಿಗೆ ತಿಳಿಸಿದರೇನೇ ನಾವು ಪರಮಾಣು ಸುರಕ್ಷತೆ ಬಗ್ಗೆ ನಮ್ಮದೂ ಕೊಡುಗೆ ನೀಡಿದಂತೆ ಎನ್ನುತ್ತಾರೆ.

ಆದರೆ `ಜಪಾನ್ ಸರ್ಕಾರವು ಈ ದುರಂತದ ಅತಿ ಗಂಭೀರ ವಿಶ್ಲೇಷಣೆಗಳನ್ನು ಮುಚ್ಚಿಟ್ಟಿದೆ ಎಂದು ರಿಬಿಲ್ಡ್ ಜಪಾನ್ ಇನಿಶಿಯೇಟಿವ್ ಫೌಂಡೇಶನ್ ಎಂಬ ಸ್ವತಂತ್ರ ಸಮಿತಿಯು ಸರ್ಕಾರವನ್ನು ಟೀಕಿಸಿದೆ. ಅದು ಮಾರ್ಚ್ ೧೧ರಂದು ತನ್ನದೇ ಸ್ವತಂತ್ರ ವರದಿಯನ್ನು ಬಿಡುಗಡೆ ಮಾಡಿದೆ. ಇಂಥ ದುರಂತ ಘಟಿಸಿದರೆ ಇಡೀ ಟೋಕಿಯೋದ ಜನರನ್ನೆಲ್ಲ ಸ್ಥಳಾಂತರ ಮಾಡಬೇಕು ಎಂಬುದೂ ಅಘೋಷಿತ ಪೂರ್ವಸಿದ್ಧತೆ ಆಗಿತ್ತಂತೆ.

ಮಾರ್ಚ್ ೧೧ರ ದಿನ ಜಗತ್ತಿನೆಲ್ಲೆಡೆಯ ಜನ ಫುಕುಷಿಮಾ ದುರಂತವನ್ನು ಸ್ಮರಿಸಿಕೊಂಡಿದ್ದಾರೆ. ಭಿಕ್ಷುಗಳು ಮೆರವಣಿಗೆ ನಡೆಸಿ ಶಾಂತಿಮಂತ್ರ ಜಪಿಸಿದ್ದಾರೆ. ಜಪಾನಿನಲ್ಲಿ ಅವತ್ತು ಮತ್ತೊಮ್ಮೆ ಜಪಾನೀಯರು ಅಭ್ಯುದಯದ ಪಣ ತೊಟ್ಟಿದ್ದಾರೆ.

ಅಮೆರಿಕನ್ ನ್ಯೂಕ್ಲಿಯರ್ ಸೊಸೈಟಿಯು ಮಾರ್ಚ್ ೮ರಂದೇ ವಿಶೇಷ ವರದಿಯೊಂದನ್ನು ಬಿಡುಗಡೆ ಮಾಡಿದೆ. ಪರಮಾಣು ಸ್ಥಾವರಗಳ ಸುರಕ್ಷತೆಗೆ ಇದರಲ್ಲಿ ಒತ್ತು.

ಈ ಅವಘಡದಲ್ಲಿ ಸೋರಿಕೆಯಾದ ಅಣುವಿಕಿರಣವು ಅಲ್ಲಿನ ಗಾಳಿ, ನೀರು, ಬೆಳೆ, ಆಹಾರ ಎಲ್ಲೆಲ್ಲೂ ಸೇರಿಕೊಂಡಿದೆ. ೧೯೪೫ರ ಹಿರೋಶಿಮಾ ನಾಗಾಸಾಕಿಯ ಬಾಂಬ್ ದಾಳಿ ಗೊತ್ತಲ್ಲ, ಅದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಪ್ರಮಾಣದ ಜಲಜನಕವು ಈ ದುರಂತದಲ್ಲಿ ಬಿಡುಗಡೆಯಾಯಿತು. ಈ ಅಣುಸ್ಥಾವರಗಳನ್ನು ಯಥಾಸ್ಥಿತಿಗೆ ತರಲು ಜಪಾನ್ ಸರಕಾರಕ್ಕೆ ಒಂಬತ್ತು ತಿಂಗಳುಗಳೇ ಬೇಕಾದವು. ನೂರು ಬಿಲಿಯ ಡಾಲರ್‌ಗಳನ್ನು (೫ ಲಕ್ಷ ಕೋಟಿ ರೂಪಾಯಿ) ಖರ್ಚು ಮಾಡಿ ಮುಂದಿನ ಮೂವತ್ತು ವರ್ಷಗಳ ಕಾಲ ಶ್ರಮಪಟ್ಟರಷ್ಟೇ ಇದನ್ನು ಸ್ವಚ್ಛಗೊಳಿಸಲು ಸಾಧ್ಯ.

ಅಣುಶಕ್ತಿಗೆ ಹಿನ್ನಡೆ

ಫುಕುಷಿಮಾ ದುರಂತದ ನಂತರ ಜರ್ಮನಿಯಂತೂ ಇನ್ನು ಹತ್ತು ವರ್ಷಗಳಲ್ಲಿ ತನ್ನೆಲ್ಲಾ ಪರಮಾಣು ಸ್ಥಾವರಗಳನ್ನು ಮುಚ್ಚಲು ನಿರ್ಧರಿಸಿದೆ. ಸ್ವಿಜರ್‌ಲ್ಯಾಂಡ್, ಸ್ಪೈನ್, ತೈವಾನ್, ಬೆಲ್ಜಿಯಂ, ಮೆಕ್ಸಿಕೋ ದೇಶಗಳು ತಮ್ಮ ಪರಮಾಣು ಶಕ್ತಿ ಯೋಜನೆಗಳನ್ನು ಮುಚ್ಚಲು ಅಥವಾ ಕ್ರಮೇಣವಾಗಿ ಕಡಿತಗೊಳಿಸಲು ನಿರ್ಧರಿಸಿವೆ.

ಭಾರತ?

ತಮಿಳುನಾಡಿನ ಕೂಡಂಕುಳಂನಲ್ಲಿ ಸ್ಥಾಪನೆಯಾಗುತ್ತಿರುವ ಪರಮಾಣು ಸ್ಥಾವರದ ಕೆಲಸವನ್ನು ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕೆಂದೇ ಅಲ್ಲಿ ಹೋರಾಟ ಮಾಡುತ್ತಿರುವ ಎಲ್ಲ ಸಂಸ್ಥೆಗಳೂ ವಿದೇಶಿ ಕುಮ್ಮಕ್ಕಿನಿಂದ ಕುತಂತ್ರ ನಡೆಸಿವೆ ಎಂದು ಪ್ರಧಾನಿ ಮನಮೋಹನ್ ಸಿಂಗ್‌ರವರೇ ಹೇಳಿದ್ದಾರೆ. ಈ ಸ್ಥಾವರವನ್ನು ರಶ್ಯಾ ದೇಶವೇ ತಂತ್ರಜ್ಞಾನ ಒದಗಿಸಿ ಸ್ಥಾಪಿಸುತ್ತಿದೆ.

ನಮ್ಮ ದೇಶದಲ್ಲಿ ಎಷ್ಟೇ ಹೆಣಗಾಡಿದರೂ ಪರಮಾಣು ಸ್ಥಾವರಗಳಿಂದ ೬೦ ಗಿಗಾವಾಟ್ ವಿದ್ಯುತ್ತನ್ನು ಮಾತ್ರ ಉತ್ಪಾದಿಸಬಹುದು. ಆದರೆ ನವೀಕರಿಸಬಲ್ಲ ಗಾಳಿ ಗಿರಣಿಗಳು, ಜೈವಿಕ ಇಂಧನ, ಕಿರು ಜಲವಿದ್ಯುತ್ ಯೋಜನೆಗಳಿಂದಲೇ ೧೫೦ ಗಿಗಾವಾಟ್ ವಿದ್ಯುತ್ ಪಡೆಯಬಹುದು. ಸ್ವಲ್ಪ ಶ್ರಮಪಟ್ಟರೆ ಸೌರ ಶಕ್ತಿಯಿಂದಲೇ ೭೦೦ ಗಿಗಾವಾಟ್ ವಿದ್ಯುತ್ ಎತ್ತಬಹುದು. ವಿಷವೂ ಇಲ್ಲ, ಸಾವೂ ಇಲ್ಲ. ಇದು ಪರಿಸರ ವಾದಿಗಳ ಪ್ರತಿಪಾದನೆ. ಅದೆಲ್ಲ ಖರ್ಚು ವಿಪರೀತ, ಪರಮಾಣುವೇಪರಮ ಮಾರ್ಗ ಎಂದು ಸರ್ಕಾರ ಹೇಳುತ್ತದೆ.

ಫುಕುಷಿಮಾ ದುರಂತದ ಮೊದಲ ವರ್ಷದ ನೆನಪಿನಲ್ಲಾದರೂ ನಾವು ಒಂದು ಅಭಿಪ್ರಾಯ ತಾಳೋಣ. ಮನೆಯಲ್ಲಿ, ಕಚೇರಿಯಲ್ಲಿ ವಿದ್ಯುತ್ ಬಳಸುವ ಮುನ್ನ ಅದು ಬೇಕೆ ಎಂದು ವಿವೇಚಿಸಿ ಬಳಸೋಣ.

ಅಷ್ಟರಮಟ್ಟಿಗೆ ನಾವು ದುರಂತಗಳನ್ನು ತಪ್ಪಿಸಬಹುದು.

——————

Leave a Reply

Your email address will not be published. Required fields are marked *

thirteen + six =